Sangeetashastragranthachandrike Volume-2
₹650.00
Author: S Karthik
ಸಂಗೀತಶಾಸ್ತ್ರಗ್ರಂಥಚಂದ್ರಿಕೆ ಯ ಎರಡನೆಯ ಸಂಪುಟವು ಭಾರತೀಯ ಸಂಗೀತದ ಶಾಸ್ತ್ರಕಾರರು ಮತ್ತು ಶಾಸ್ತ್ರಗ್ರಂಥಗಳ ಚರಿತ್ರೆಯನ್ನು ಒಳಗೊಂಡ ಕೃತಿಯಾಗಿದೆ. ಇದರಲ್ಲಿ ಪ್ರಕಟಿತ, ಅಪ್ರಕಟಿತ, ಲಭ್ಯ, ಅಲಭ್ಯ ಶಾಸ್ತ್ರಗ್ರಂಥಗಳ ಬಗೆಗೆ ಮೂಲ ಆಕರಗಳನ್ನೇ ಆಮೂಲಾಗ್ರವಾಗಿ ಗಮನಿಸಿ, ವಿಶದವಾಗಿ ಪರಿಚಯ ಮಾಡಿಕೊಡಲಾಗಿದೆ. ಎಷ್ಟೋ ಜನ ಅಜ್ಞಾತಶಾಸ್ತ್ರಕಾರರು ಮತ್ತು ಶಾಸ್ತ್ರಕೃತಿಗಳ ಬಗೆಗೆ ಖಚಿತವಾದ ಮಾಹಿತಿ ಆಕರ ಸಾಮಗ್ರಿಯ ಸಹಿತ ಇಲ್ಲಿ ದೊರಕುತ್ತದೆ. ಕರ್ನಾಟಕ ಸಂಗೀತ ಎಂಬ ಹೆಸರು ಹೇಗೆ ಬಂತೆಂಬ ವಿಚಾರದಲ್ಲಿ ಸ್ಪಷ್ಟವಾದ ವಿವರಗಳು ಇಲ್ಲಿ ದಾಖಲಾಗಿವೆ. ಹಿಂದಿನ ಅಧ್ಯಯನಗಳಿಗಿಂತ ಹೆಚ್ಚು ವಸ್ತುನಿಷ್ಠ ಮಾಹಿತಿ ಇಲ್ಲಿ ದೊರಕುತ್ತದೆ. ಕ್ರಿ.ಶ.ಸು ೧೨೫೦-೧೪೦೦ರ ನಡುವಿನ ಅವಧಿಯಲ್ಲಿದ್ದ ಶಾಸ್ತ್ರಕಾರರು ಮತ್ತು ಆ ಅವಧಿಯಲ್ಲಿ ರಚಿತವಾಗಿರುವ ಶಾಸ್ತ್ರಗ್ರಂಥಗಳ ಬಗೆಗೆ ರಚಿತವಾಗಿರುವ ಈ ಕೃತಿಯ ದ್ವಿತೀಯ ಸಂಪುಟವು ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ವಿರಳ ಅಪರೂಪದ ಕೃತಿಗಳಲ್ಲಿ ಒಂದಾಗಿದೆ.
Interested customers may write to us at mup@manipal.edu about purchasing the book.
Categories: | Indian Regional Languages, Kannada |
---|
Related products
-
MOMO
Author: Michael Ende ,Translator: Jayashree Kasaravalli
The fantasy novel originally written in German and translated into English, has been enjoyed by millions of readers worldwide. It has now been translated into Kannada as well. The novel has a very unusual story about time. The story describes how people in the modern era use the time, and a girl named MOMO teaches how it should be used. Humans have stolen time from modern societies, and a little girl of mysterious origin brings it back. In today’s society, the story has timeless relevance.
ನಗರದ ಅಂಚಿನಲ್ಲಿ ಹಾಳುಬಿದ್ದಿದೆ ಒಂದು ಆಂಪಿ ಥೀಯೇಟರ್. ಅಲ್ಲಿರುವ ದಿಕ್ಕಿಲ್ಲದ ಪುಟ್ಟ ಹುಡುಗಿ ಮೊಮೊ. ಒಂದು ದಿನ ಬೂದು ಬಣ್ಣದ ಬಟ್ಟೆ ತೊಟ್ಟು ದುಷ್ಟರು ಸದ್ದಿಲ್ಲದೇ ಬಂದು ನಗರವನ್ನು ಆಕ್ರಮಿಸಿಕೊಳ್ಳುತ್ತಾರೆ. ಅವರನ್ನು ಹಿಮ್ಮೆಟ್ಟಿಸುವ ಶಕ್ತಿಯಿರುವುದು ಮೊಮೊಗೆ ಮಾತ್ರ. ಅವಳು ಪ್ರೊಫೆಸರ್ ಹೋರಾ ಮತ್ತು ಅವರಲ್ಲಿರುವ ವಿಚಿತ್ರ ಆಮೆಯ ನೆರವಿನಿಂದ ಕಾಲದ ಸರಹದ್ದುಗಳನ್ನು ದಾಟಿ ಆ ದುಷ್ಟರ ಒಳಸಂಚುಗಳನ್ನು ಬಯಲುಮಾಡುತ್ತಿದ್ದಾಳೆ. ‘ಮೊಮೊ’ ಕಾಲವನ್ನು ಕದಿಯುವವರ ಕಥೆಯಾಗಿರುವ ಜೊತೆಗೇ ಕದ್ದ ಕಾಲವನ್ನು ಮತ್ತೆ ಜನರಿಗೆ ತಂದುಕೊಡುವ ಒಂದು ಮಗುವಿನ ಸಾಹಸಮಯ ಕಥೆಯು ಆಗಿದೆ.
Interested customers may write to us at mup@manipal.edu about purchasing the book.
-
Grama Sannidhya
ಗ್ರಾಮ ಸಾನ್ನಿಧ್ಯAuthor: Krishna Kothai
ಗ್ರಾಮ ಭಾರತವೇ ನೈಜ ಭಾರತವೆಂಬ ಉಕ್ತಿಯೊಂದಿದೆ. ಈ ಉಕ್ತಿ ಅತಿಶಯೋಕ್ತಿಯಲ್ಲ. ಪಂಜಾಬ ಸಿಂಧ, ಗುಜರಾತ, ಮರಾಠ, ದ್ರಾವಿಡ, ಉತ್ಕಲ, ವಂಗ ಎನ್ನುವಾಗ ಅಥವಾ ಸುಜಲಾಂ, ಸುಫಲಾಂ, ಮಲಯಜ ಶೀತಲಾಂ, ಸಸ್ಯಶಾಮಲಾಂ, ಮಾತರಂ… ವಂದೇ ಮಾತರಂ ಎನ್ನುವಾಗ ನಮ್ಮ ಕಣ್ಣೆದುರು ಬಂದು ನಿಲ್ಲುವುದು ಭಾರತದ ವೈವಿಧ್ಯಪೂರ್ಣ ಗ್ರಾಮಗಳು, ಅಲ್ಲಿನ ಜನ-ಅವರ ಜನಜೀವನ. ಬದಲಾದ ಹಾಗೂ ಬದಲಾಗುತ್ತಿರುವ ಭಾರತೀಯ ಸಂದರ್ಭದಲ್ಲಿ, ಕೊಳ್ಳುಬಾಕ, ನಗರೀಕೃತ ನಾಗರೀಕತೆ, ಗ್ರಾಮೀಣ ಬದುಕಿಗಿಂತ ಶ್ರೇಷ್ಠವಾದುದೆಂಬ ಒಂದು ಸಿದ್ಧಾಂತ ಯುವಪೀಳಿಗೆಯನ್ನು ಅನಾವಶ್ಯಕ ಅನುಮಾನಗಳಿಗೆ ತಳ್ಳುತ್ತಿದೆ. ಇದೊಂದು ಅರೆಬೆಂದ ಚಿಂತನೆ. ಭೂತಾನದಂತಹ ರಾಷ್ಟ್ರಗಳಲ್ಲಿ ಮನುಷ್ಯನ ಸಂತೋಷ- ಸಂತೃಪ್ತಿಯನ್ನು ಅವನ ಅಭಿವೃದ್ಧಿ ಮಾಪನವಾಗಿ ಬಳಸಲಾಗುತ್ತಿದೆ. ಈ ತೆರನಾದ ಅಭಿವೃದ್ಧಿ ಪ್ರಕೃತಿ ಸಹ್ಯ ಗ್ರಾಮೀಣ ವಾತಾವರಣದಲ್ಲಷ್ಟೇ ಸಾಧ್ಯ-ಷಹರಗಳಲ್ಲಿ ಅಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಪುಸ್ತಕವನ್ನು ರಚಿಸಲಾಗಿದೆ. ಅಂತಿಮವಾಗಿ ಅಭಿವೃದ್ಧಿ’ ಎಂಬ ಪದದ ನಿಜಾರ್ಥವೇನೆಂಬ ಪ್ರಶ್ನೆ’ ಪುಸ್ತಕದುದ್ದಕ್ಕೂ ಕಾಡುತ್ತ ಹೋಗುತ್ತದೆ. ಹಲವು ವರ್ಷಗಳಿಂದ ಲೇಖಕನನ್ನು ಕಾಡುತ್ತ ಬಂದ ಪ್ರಶ್ನೆ’, ಪುಸ್ತಕದ ವಿವಿಧ ಅಧ್ಯಾಯಗಳಲ್ಲಿ ತಲೆ ಎತ್ತಿ, ಗೊಂದಲ ಸೃಷ್ಟಿಸುತ್ತವೆ. ಸುಮಾರು ಆರು ದಶಕಗಳಿಗೂ ಹೆಚ್ಚಿನ ಗ್ರಾಮೀಣ ನೆಲದ ಸಂಪರ್ಕ, ವಿಶಿಷ್ಟ ಅನುಭವಗಳು, ಅಪಾರ ಸಂದೇಶಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಗ್ರಾಮೀಣ ಬದುಕಿನ ಅನನ್ಯತೆಯನ್ನು ಅನಾವರಣಗೊಳಿಸುವ ಕಾಯಕವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಐವತ್ತನೆಯ ದಶಕದ ಗ್ರಾಮೀಣ ಬದುಕನ್ನು, ಅಂದಗಾರಿನ ಊರು, ದೇವಸ್ಥಾನ, ಶಾಲೆ, ಗ್ರಾಮೀಣರು, ಅವರ ಬದುಕಿನ ಪರಿ, ಜೀವನಾನುಭವ, ಸ್ನೇಹ ಭಾವ, ಸಜ್ಜನಿಕೆ, ತೃಪ್ತ ಜೀವನ ಇನ್ನಿತರ ವಿವರಗಳೊಡನೆ ದಾಖಲಿಸಲಾಗಿದೆ. ಅದಕ್ಕೆ ಪರ್ಯಯವಾಗಿ, ಬದಲಾದ ಇಂದಿನ ಅಂದಗಾರನ್ನು (2020) ಚಿತ್ರಿಸಲಾಗಿದೆ. ಇದರ ನಡುವೆ ರಾಜ್ಯದ ಬೇರೆ ರಾಷ್ಟ್ರಗಳ ಗ್ರಾಮೀಣ ಬದುಕಿನ ವಿವರಗಳನ್ನು ಕೊಡಲಾಗಿದೆ. ಲೇಖಕನ ಬದುಕಿನಲ್ಲಿ ಹಾದು ಹೋದ ಗ್ರಾಮವರೇಣ್ಯರ ನೆನಪು ಈ ಪುಸ್ತಕದಲ್ಲಿದೆ. ಗಾಂಧೀಜಿ ಪ್ರಣೀತ ಪ್ರಕೃತಿಯೊಡನೆ ಸದಾ ಅನುಸಂಧಾನದಲ್ಲಿರುವ, ಸ್ನೇಹ, ಸಹೃದಯತೆ ಸದಾಚಾರ, ಸಹಬಾಳ್ವೆ, ಸಂತೃಪ್ತಿಯ ತಂಗುದಾಣಗಳಾದ ಸಹಸ್ರಾರು ಹಳ್ಳಿಗಳ ರೂಪಕವೊಂದನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ‘ಗ್ರಾಮ ಸಾನ್ನಿಧ್ಯ’ ಕೃತಿಯಲ್ಲಿದೆ.
Interested overseas customers may write to us at mup@manipal.edu about purchasing the book.
-
Daddal Kaadina Mouna
Author: Shashiraj Kavoor
ದಡ್ಡಾಲ್ ಕಾಡಿನ ಮೌನ’ ಕಿರು ಕಾದಂಬರಿಯಲ್ಲಿ ಶಶಿರಾಜ್ ಅವರು ಕೊರಗ ಸಮುದಾಯದ ಬಗ್ಗೆ ಸಾಕಷ್ಟು ಕ್ಷೇತ್ರಕಾರ್ಯದ ಅಧ್ಯಯನ ನಡೆಸಿ, ಆಧುನಿಕತೆಯ ಸಂಕ್ರಮಣಕಾಲದಲ್ಲಿನ ಕೊರಗರ ಬದುಕಿನ ಸಂಗತಿಗಳನ್ನು ಸಾಂಸ್ಕೃತಿಕ ನೆಲೆಯಲ್ಲಿ ನೋಡಲು ಪ್ರಯತ್ನಿಸಿದ್ದಾರೆ. ಅದರ ಜೊತೆಗೆಯೇ ತುಳುವ ಸಂಸ್ಕೃತಿಯ ಗುತ್ತುವಿನಂತಹ ಪರಂಪರೆಯ ಆಡಳಿತದ ಚೌಕಟ್ಟಿನಲ್ಲಿ ನಡೆಯುತ್ತಿದ್ದ ದೈವಾರಾಧನೆಯ ಸ್ವರೂಪ ಮತ್ತು ಸಮಸ್ಯೆಗಳನ್ನು ಕೂಡಾ ಪೋಣಿಸಿದ್ದಾರೆ. ಕೆಲವು ದಶಕಗಳ ಹಿಂದೆ ತುಳುನಾಡಿನಲ್ಲಿ ನಡೆಯುತ್ತಿದ್ದಂತಹ ವಿದ್ಯಮಾನಗಳನ್ನು ಕುರಿತ ಕೆಲವು ಸೂಕ್ಷ್ಮ ನೋಟಗಳು ಇಲ್ಲಿನ ಕಥಾ ಸಂವಿಧಾನದಲ್ಲಿ ಸೇರಿಕೊಂಡಿವೆ. ಇನ್ನೊಂದು ಕಡೆ ಆಧುನಿಕ ವೈದ್ಯಕೀಯ ಪದ್ಧತಿಯು ಬಂದ ಬಳಿಕವೂ ದೇಸಿ ಪರಂಪರೆಯ ವೈದ್ಯಪದ್ಧತಿ ಮತ್ತು ನಂಬಿಕೆಗಳು ಕ್ರಿಯಾಶೀಲವಾಗಿ ಇರುವುದರ ವಾಸ್ತವದ ಚಿತ್ರಣವೂ ಅನಾವರಣವಾಗಿದೆ. ಒಂದು ವ್ಯವಸ್ಥೆಯ ಒಳಗಿನ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಏಕಕಾಲಕ್ಕೆ ಕ್ರಿಯಾಶೀಲವಾಗಿ ಇರುವ ವೈರುಧ್ಯದ ಸಂಗತಿಗಳೂ ಇಲ್ಲಿ ಕಾಣಿಸುತ್ತವೆ. ಕೊರಗಸಮುದಾಯದ ಸಂಕೀರ್ಣ ಭಾವನೆಗಳ ತೊಳಲಾಟವನ್ನು ಇಲ್ಲಿ ಗ್ರಹಿಸಬಹುದು. ಕುಲಸಂಬಂಧಿ ಆಚರಣೆಗಳನ್ನು ಮಾಡುತ್ತಲೂ ಅವುಗಳಲ್ಲಿನ ಅಮಾನವೀಯ ಅಂಶಗಳನ್ನು ತೊಡೆದುಹಾಕುವ ಮನೋಧರ್ಮವು ಕಾದಂಬರಿಯ ಬೆಳವಣಿಗೆಯಲ್ಲಿ ಕಾಣಿಸುತ್ತದೆ.
Interested readers may write to us at mup@manipal.edu about purchasing the book.
-
Ati Sannakathe: Swarupa, Siddhi Mattu Sadhyate
Author: T P Ashoka Translator: Prakash Nayak
ಕಲ್ಪನೆ ಎಂಬುದು ಸತ್ಯಕ್ಕಿಂತ ಹೆಚ್ಚು ಸತ್ಯ, ಕನಸು ಎಂಬುದು ವಾಸ್ತವಕ್ಕಿಂತ ಹೆಚ್ಚು ವಾಸ್ತವ ಎಂಬುದು ಅತಿ ಸಣ್ಣಕತೆಗಳು ನಮಗೆ ಮನದಟ್ಟು ಮಾಡಿಕೊಡುವಂತೆ ಕಾಣುತ್ತವೆ. ಹೆಚ್ಚಿನ ಅತಿ ಸಣ್ಣಕತೆಗಳು ವಾಸ್ತವವಾದೀ ಮಾರ್ಗವನ್ನು ಬಿಟ್ಟುಕೊಟ್ಟಿರುವುದಕ್ಕೆ ಪ್ರಾಯಶಃ ಇದೇ ಕಾರಣ. ವಿವರಣೆ-ವರ್ಣನೆಗಳ ಹಂಗು ಇಲ್ಲದಿರುವುದರಿಂದ ಸಂಕ್ಷಿಪ್ತತೆ ಮತ್ತು ಸಾಂದ್ರತೆಗಳು ಇವುಗಳ ಸಹಜ ಲಕ್ಷಣಗಳಾಗಿವೆ. ಅಂತರಂಗದ ಆಳವನ್ನು, ಅಮೂರ್ತವನ್ನು, ಸಾಂಕೇತಿಕವಾದುದದ್ದನ್ನು ಮತ್ತೊಂದೇ ಸ್ತರದಲ್ಲಿ ಗ್ರಹಿಸಿ ಅಭಿವ್ಯಕ್ತಿಸಲು ಲೇಖಕರಿಗೆ ಈ ಪ್ರಕಾರ ಹೇಳಿ ಮಾಡಿಸಿದಂತಿದೆ. ಹಾಗಾಗಿ ಜಗತ್ತಿನ ಎಲ್ಲ ಭಾಷೆಗಳ ದೊಡ್ಡ ಲೇಖಕರು, ದೀರ್ಘವಾದ ಕತೆ-ಕಾದಂಬರಿಗಳನ್ನು ಬರೆದವರನ್ನೂ ಸೇರಿಸಿಕೊಂಡು, ಈ ಪ್ರಕಾರದಲ್ಲಿ ಕೃಷಿಮಾಡಿದ್ದಾರೆ. ತುಂಬ ಸೂಕ್ಷ್ಮವಾದ, ನಾಜೂಕಾದ ಸಂಗತಿಗಳನ್ನು ಸೂಚ್ಯವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಇನ್ನೂ ಕೆಲವು ವೇಳೆ ಮುಚ್ಚಿಟ್ಟು ಹೇಳಲು ಈ ಪ್ರಕಾರವು ತನ್ನ ಸ್ವರೂಪದ ಕಾರಣದಿಂದಲೇ ಅನುವು ಮಾಡಿಕೊಡುತ್ತದೆ. ಇದು ಆಧುನಿಕ ಪೂರ್ವದ ದಂತಕತೆ, ನೀತಿಕತೆ, ದೃಷ್ಟಾಂತ ಕತೆಗಳ ಆಧುನಿಕ ರೂಪವಾಗಿ ಕಂಡರೂ ಆಶ್ಚರ್ಯವಿಲ್ಲ.
Also available on
eBook available on
-
Sangita Lokadrishti
Author: Sumangala
ತಂದೆ-ಮಗಳ ಸುರಬಹಾರಿನ ಸಂಗೀತಬಂಧದ ಚಿತ್ರಣದಿಂದ ಆರಂಭಗೊಳ್ಳುವ ಈ ಕಿರುಕೃತಿಯು ಸಾಗರ ವೀಣೆ ರೂಪುಗೊಳಿಸಿದ ಇನ್ನೊಂದು ತಂದೆ-ಮಗಳ ಸಂಗೀತಬಂಧದ ಚಿತ್ರಣದೊಂದಿಗೆ ಮುಕ್ತಾಯವಾಗುತ್ತದೆ. ಇಲ್ಲಿ ನಾಲ್ವರು ಸಂಗೀತಗಾರರ ಬದುಕಿನ ಕೆಲವು ಸನ್ನಿವೇಶಗಳು, ಸಂಗೀತಪಯಣದಲ್ಲಿ ಅವರು ಸಾಗಿದ ಹಾದಿ, ಕಠಿಣ ಸಂದರ್ಭಗಳು, ಅವರ ಸಾಂಗೀತಿಕ ಮನೋಧರ್ಮ, ರಾಗರೂಪದ ಕುರಿತ ದೃಷ್ಟಿಕೋನ, ಇತ್ಯಾದಿ ಅಂಶಗಳ ಸ್ಥೂಲ ಚಿತ್ರಣವಿದೆ.
ಸುರಬಹಾರಿನ ದಂತಕಥೆಯೆಂದೇ ಹೇಳಬಹುದಾದ ವಿದುಷಿ ಅನ್ನಪೂರ್ಣಾ ದೇವಿಯವರ ಖಾಸಗಿ ಬದುಕು, ಏಕಾಂತ ನಿಗೂಢವೆನ್ನಿಸುವ ಹಾಗೆಯೇ ಮೈಹರ್ ಘರಾನೆಯ ಸ್ವರಸಂಪತ್ತನ್ನು ಶಿಷ್ಯರಿಗೆ ಧಾರೆಯೆರೆದು ಕಲಿಸುತ್ತ, ಹಲವರನ್ನು ಮೇರು ಕಲಾವಿದರಾಗಿ ರೂಪುಗೊಳಿಸಿದ ಬಗೆಯೂ ಅನನ್ಯ. ಕೃತಿಯಲ್ಲಿ ಚಿತ್ರಿಸಿದ ಇನ್ನುಳಿದ ಮೂವರು ಸಂಗೀತಗಾರರು ನಮ್ಮ ನೆರೆಯ ಪಾಕಿಸ್ತಾನದ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಇನ್ನಷ್ಟು ಸಮೃದ್ಧಗೊಳಿಸಿದವರು.
“ಏ ದಯ್ಯಾ… ಕಹಾಂ ಗಯೇ ವೇ ಲೋಗ್… ಬ್ರಿಜ ಕೆ ಬಸಯ್ಯಾ…”
ಮನುಷ್ಯರ ನಡುವೆ ಹತ್ತುಹಲವು ಬಗೆಯ ದ್ವೇಷದ ಗೋಡೆಗಳು ಎದ್ದು ನಿಂತಿರುವ ಇಂದಿನ ದಿನಮಾನದಲ್ಲಿ ಭಿನ್ನತೆಗಳಿದ್ದರೂ ಪರಸ್ಪರ ಸಂವಾದ ನಡೆಸುತ್ತಿದ್ದ ಆ ಜನರನ್ನು, ಆ ಕಾಲಘಟ್ಟವನ್ನು ಮತ್ತೆ ಕಂಡುಕೊಳ್ಳಲು ಬಹುಶಃ ಇಂತಹ ಸಂಗೀತಗಾರರ ಕೊರಳೊಳಗಿನ, ಬೆರಳೊಳಗಿನ ಸ್ವರಗಳೇ ನಮ್ಮ ಕೈಹಿಡಿದು ಮುನ್ನಡೆಸಬೇಕಿದೆ.
Interested readers may write to us at mup@manipal.edu about purchasing the book.
-
Bhagavantana Kandammagalu
Author: Susmita Bagchi, Translator: Madhavi S Bhandary
ಅನುಪೂರ್ವಾ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಅಮೇರಿಕಾ ಬಿಟ್ಟು ಭಾರತಕ್ಕೆ ಬರಬೇಕಾಯಿತು. ಕಲಾಶಿಕ್ಷಕಿಯಾಗಿ ಅಲ್ಲವಳ ಜೀವನ ಸುವ್ಯವಸ್ಥಿತವಾಗಿ ಸಾಗುತ್ತಿತ್ತು. ಭಾರತಕ್ಕೆ ಹಿಂದಿರುಗಿದ ನಂತರ ಅವಳ ಬದುಕು ಆಮೂಲಾಗ್ರವಾಗಿ ಬದಲಾಯಿಸಬಹುದೆಂದು ಅವಳು ಕನಸು-ಮನಸಲ್ಲೂ ಎಣಿಸಿರಲಿಲ್ಲ. ಒಮ್ಮೆ ಅವಳ ಕಾಲೇಜಿನ ಗೆಳತಿಯೊಬ್ಬಳು ಸೆರೆಬ್ರಲ್ ಪಾಲ್ಸಿ (ಮೆದುಳಿನ ಲಕ್ವ)ಯಿಂದ ಬಳಲುತ್ತಿರುವ ಮಕ್ಕಳ ಶಾಲೆ ‘ಆಶಾಜ್ಯೋತಿ’ಯ ಪರಿಚಯ ಮಾಡಿಸಿದಳು. ಅಲ್ಲಿಯೇ ಸ್ವಲ್ಪಕಾಲ ಆರ್ಟ್ ಟೀಚರ್ ರೂಪದಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವ ಅವಕಾಶವೂ ದೊರೆಯಿತು. ಚಿತ್ರಗಳನ್ನು ಬಿಡಿಸುವುದು ಹೇಗೆ, ಅದಕ್ಕೆ ಹೇಗೆ ಬಣ್ಣ ತುಂಬಬೇಕು ಇತ್ಯಾದಿ ವಿಷಯಗಳನ್ನು ಅಲ್ಲಿಯ ಮಕ್ಕಳಿಗೆ ಹೇಳಿಕೊಡಲಾರಂಭಿಸಿದಳು. ಆದರೆ ಆ ಮಕ್ಕಳು ಅವಳಿಗರಿವಿಲ್ಲದಂತೆ ಗೆಳೆತನದ, ಪ್ರೇಮದ, ನಗುವಿನ, ಎಲ್ಲಕ್ಕಿಂತಲೂ ಮಿಗಿಲಾಗಿ ರೋಗದೊಂದಿಗೆ ಹೋರಾಡುವ ಪಾಠ ಅರ್ಥಾತ್ ಬದುಕಿನ ವಾಸ್ತವಿಕತೆಯ ಪಾಠ ಕಲಿಸಬಹುದೆಂದು ಅವಳಿಗೇನು ಗೊತ್ತಿತ್ತು! ಹೊರಜಗತ್ತು ಅವರನ್ನು ಶಾರೀರಿಕ ಅಥವಾ ಮಾನಸಿಕ ದೃಷ್ಟಿಯಿಂದ ದುರ್ಬಲರೆಂದು ತಿಳಿದುಕೊಳ್ಳಲಿ! ಆದರೆ ಅವರ ಅಂತರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಪಾರ ಕ್ಷಮತೆ ಅಡಗಿದೆ ಎಂಬುದು ಅವಳ ಅರಿವಿನ ಕ್ಷಿತಿಜವನ್ನೇ ವಿಸ್ತರಿಸಿತು. ಅನುಪೂರ್ವಾ ಮತ್ತಾರೂ ಅಲ್ಲ, ಸ್ವಯಂ ಲೇಖಕಿಯೇ! ಈ ಮಕ್ಕಳ ಅಂತರಂಗದ ಪುಟಗಳನ್ನು ಅತ್ಯಂತ ಹತ್ತಿರದಿಂದ ನೋಡಿದ್ದಾರೆ; ತಿಳಿದಿದ್ದಾರೆ; ಮತ್ತದನ್ನು ಶಬ್ದಗಳ ಮೂಲಕ ಕಾದಂಬರಿಯ ರೂಪದಲ್ಲಿ ಜೋಡಿಸಿದ್ದಾರೆ. ಈ ಒಂದು ರೋಚಕವಾದ ಕಥೆ ಒಡಿಯಾದಲ್ಲಿ ‘ದೇಬಶಿಶು’ವಾಗಿದ್ದುದು, ಅಜಯ್ ಪಟ್ನಾಯಕ್ರು ಅದನ್ನು ‘ದೇವಶಿಶು’ ವಾಗಿ ಹಿಂದಿಗೆ ಅನುವಾದಿಸಿದರು. ಆ ಹಿಂದಿ ಅನುವಾದವು ಜ್ಞಾನಪೀಠ ಪ್ರಕಾಶನದಿಂದ ಪ್ರಕಟಗೊಂಡಿದೆ. ಈ ಕೃತಿಯು ಬಿಕ್ರಮ್ ಕೆ. ದಾಸ್ರಿಂದ ‘Children of Better God’ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೂ ಅನುವಾದಗೊಂಡಿದೆ. ಇದೀಗ ‘ಭಗವಂತನ ಕಂದಮ್ಮಗಳು’ ರೂಪದಲ್ಲಿ ಕನ್ನಡದ ಓದುಗರ ಮುಂದಿದೆ.
Interested customers may write to us at mup@manipal.edu about purchasing the book.
Also available on
-
Dodda Samagara Nalmoga
Author: Dinesh Uppoora
ದೊಡ್ಡ ಸಾಮಗರೆಂದೇ ಪ್ರಸಿದ್ಧರಾದ ಮಲ್ಪೆ ಶಂಕರನಾರಾಯಣ ಸಾಮಗರು ಬಹುಮುಖ ವ್ಯಕ್ತಿತ್ವವುಳ್ಳ ಒಬ್ಬ ಮಹಾನ್ ದಾರ್ಶನಿಕ. ಸ್ವಾತಂತ್ರ್ಯ ಹೋರಾಟಗಾರರಾಗಿ ಬ್ರಿಟಿಷರ ಆಡಳಿತದ ಧೋರಣೆಗಳ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದವರು, ಹರಿಕಥಾದಾಸರಾಗಿ ತನ್ನ ವಿಚಾರಧಾರೆಯನ್ನು ಸಮಾಜಕ್ಕೆ ಪ್ರಚುರಪಡಿಸಿದವರು, ತನ್ನ ಪ್ರತ್ಯುತ್ಪನ್ನಮತಿತ್ವದಿಂದ, ಅಗಾಧವಾದ ಪಾಂಡಿತ್ಯದಿಂದ ತಾಳಮದ್ದಳೆ ಅರ್ಥಧಾರಿಗಳಾಗಿ ಕಲಾರಸಿಕರ ಮನಗೆದ್ದವರು. ಉತ್ತಮ ವೇಷಧಾರಿಗಳಾಗಿ ಬೇಡಿಕೆಯ ಕಲಾವಿದರಾದವರು, ಸರಳ ಜೀವನದ ಆದರ್ಶ ವ್ಯಕ್ತಿತ್ವದಿಂದ ಗಾಂಧಿವಾದಿಗಳಾಗಿ ಬದುಕಿದವರು. ಇವರು 1911 ರ ಡಿಸೆಂಬರ್ 11 ರಂದು ಜನಿಸಿ, 1999 ರ ಆಗಸ್ಟ್ 1 ರಂದು ನಿಧನರಾದರು.
ಅವರ ಜೀವನದ ಘಟನೆಗಳನ್ನು ಆಧರಿಸಿ ಬರೆದ “ದೊಡ್ಡ ಸಾಮಗರ ನಾಲ್ಮೊಗ”ವನ್ನು ದಿನೇಶ ಉಪ್ಪೂರರು ಹಲವಾರು ಗ್ರಂಥ, ಸ್ನೇಹಿತರು, ಅಂತರ್ಜಾಲ ಇತ್ಯಾದಿಗಳಿಂದ ಸಂಗ್ರಹಿಸಿ ಅನಾವರಣಗೊಳಿಸಿದ್ದಾರೆ.
Interested readers may write to us at mup@manipal.edu about purchasing the book.
-
Madhavi Kathana Kavya
Author: ONV Kurup Translator: Parvathi G Aithal
ವ್ಯಾಸ ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುವ ಒಂದು ಉಪಾಖ್ಯಾನವನ್ನಾಧರಿಸಿ ಬರೆದ ಒಂದು ಕಾವ್ಯವಿದು. ಮೂಲಕಥೆಯಲ್ಲಿ ಮಾಧವಿಯ ಶೋಷಣೆ ಎದ್ದು ಕಾಣುವುದಿಲ್ಲ. ವಿಶ್ವಾಮಿತ್ರ ಶಿಷ್ಯನಾದ ಗಾಲವನು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಹೊರಡುವಾಗ ‘ಗುರುದಕ್ಷಿಣೆಯಾಗಿ ಏನನ್ನು ಕೊಡಲಿ?’ ಎಂದು ಕೇಳುತ್ತಾನೆ. ವಿಶ್ವಾಮಿತ್ರರು ಗುರುದಕ್ಷಿಣೆ ಬೇಡವೆಂದರೂ ಕೇಳುವುದಿಲ್ಲ. ಕೊನೆಗೆ ವಿಶ್ವಾಮಿತ್ರರು, ‘ಒಂದು ಕಿವಿ ಮಾತ್ರ ಕಪ್ಪಾಗಿರುವ ಎಂಟುನೂರು ಶ್ವೇತಾಶ್ವಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಬಾ’ ಎಂದು ಹೇಳುತ್ತಾರೆ. ಆದರೆ, ಅಂಥ ವಿಶೇಷ ಗುಣದ ಕುದುರೆಗಳು ಬಹಳ ದುರ್ಲಭವಾದುವೆಂಬುದನ್ನು ಅರಿತಾಗ ಗಾಲವ ದಾನಶೂರ ಯಯಾತಿ ಮಹಾರಾಜನ ಬಳಿ ಸಹಾಯ ಬೇಡಲು ಹೋಗುತ್ತಾನೆ. ಆಗಷ್ಟೇ ದೊಡ್ಡದೊಂದು ಯಾಗ ಮುಗಿಸಿದ ಯಯಾತಿಯ ಬಳಿ ಅಶ್ವಗಳಿಲ್ಲ. ಆದರೆ, ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಯಯಾತಿ ತನ್ನ ಮಗಳು ಮಾಧವಿಯನ್ನು ಗಾಲವನ ವಶಕ್ಕೆ ಬಿಟ್ಟು ‘ರೂಪಸಿಯಾದ ಈಕೆಯನ್ನು ಬೇಕಾದ ಹಾಗೆ ಬಳಸಿಕೊಂಡು ನಿನಗೆ ಬೇಕಾದ ಅಶ್ವಗಳನ್ನು ಪಡೆ’ ಅನ್ನುತ್ತಾನೆ. ಹಾಗೆ ಗಾಲವನು ಮಾಧವಿಯನ್ನು ಮೂರು ಮಂದಿ ರಾಜರ ಬಳಿಗೆ ಕರೆದೊಯ್ದು ಅವರಿಂದ ತಲಾ ಇನ್ನೂರು ಅಶ್ವಗಳನ್ನು ಪಡೆದು ಆ ರಾಜರುಗಳಿಗೆ ಒಂದು ವರ್ಷದ ಮಟ್ಟಿಗೆ ಉಪಯೋಗಿಸಿಕೊಳ್ಳಲು ಮಾಧವಿಯನ್ನು ಒಪ್ಪಿಸುತ್ತಾನೆ. ಮೂಲ ಕಥೆಯಲ್ಲಿ ಮಾಧವಿಯ ಮನಸ್ಸಿನ ಸಂಘರ್ಷಗಳು ವ್ಯಕ್ತವಾಗಿಲ್ಲ. ‘ಪುರುಷರಿಂದ ಲೈಂಗಿಕವಾಗಿ ಎಷ್ಟು ಸಾರಿ ಬಳಸಲ್ಪಟ್ಟರೂ ನನ್ನ ಕನ್ಯತ್ವ ಉಳಿಯುವಂಥ ವರ ನನಗಿದೆಯಾದ್ದರಿಂದ ನಾನು ನಿನಗೆ ಸಹಾಯ ಮಾಡಬಲ್ಲೆ’ ಎಂದು ಗಾಲವನ ಬಳಿ ಅವಳೇ ಹೇಳುತ್ತಾಳೆ . ಓಎನ್ವಿ ಕುರುಪ್ ಬರೆದ ಈ ಕೃತಿಯಲ್ಲಿ ಅವರು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿ ಇಡೀ ಕಥೆಯನ್ನು ಪುರುಷರಿಂದ ಘೋರ ಅನ್ಯಾಯಕ್ಕೊಳಗಾಗಿ ಮಾನಸಿಕ ಯಾತನೆಯನ್ನು ಅನುಭವಿಸಿರಬಹುದಾದ ಮಾಧವಿಯ ದೃಷ್ಟಿಯಿಂದ ಬರೆಯಲಾಗಿದೆ. ಆದ್ದರಿಂದ ಇದರ ಸ್ತ್ರೀವಾದಿ ಓದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ.ಮಲಯಾಳದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಓಎನ್ವಿಕುರುಪ್ ಅವರ ‘ಸ್ವಯಂವರಂ’ ಎಂಬ ಖಂಡಕಾವ್ಯದ ಭಾವಾನುವಾದವಿದು. ಮಹಾಭಾರತದ `ಉದ್ಯೋಗ ಪರ್ವ’ ದಲ್ಲಿ ಬರುವ ಒಂದು ಉಪಾಖ್ಯಾನದಲ್ಲಿ ಪುರುಷ ವರ್ಗದಿಂದ ಘೋರವಾಗಿ ಶೋಷಣೆಗೊಳಗಾದ ಮಾಧವಿ ಈ ಕಥೆಯ ನಾಯಕಿಯಾಗಿದ್ದು ಇಡೀ ಕಾವ್ಯವೇ ಅವಳ ದೃಷ್ಟಿಕೋನದಿಂದ ರಚಿತವಾಗಿದ್ದರಿಂದ ಸ್ತ್ರೀವಾದಿ ಓದಿಗೆ ಒಳಪಡಿಸಲು ಅತ್ಯಂತ ಸೂಕ್ತವಾದ ಕೃತಿಯಿದು ಎಂದೆನ್ನಿಸಿ ಅನುವಾದಕಿ ಅದರ ಶೀರ್ಷಿಕೆಯನ್ನು ‘ಮಾಧವಿ ಕಥನ ಕಾವ್ಯ’ವೆಂದು ಬದಲಾಯಿಸಿದ್ದಾರೆ . ಇದನ್ನು ಓದಿದಾಗೆಲ್ಲ ರಾಮಾಯಣದ ಸೀತೆಯ ನೆನಪಾಗುತ್ತದೆ.
Interested customers may write to us at mup@manipal.edu about purchasing the book.
Also available on