Madhavi Kathana Kavya

By (author)ONV Kurup

195.00

ವ್ಯಾಸ ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುವ ಒಂದು ಉಪಾಖ್ಯಾನವನ್ನಾಧರಿಸಿ ಬರೆದ ಒಂದು ಕಾವ್ಯವಿದು. ಮೂಲಕಥೆಯಲ್ಲಿ ಮಾಧವಿಯ ಶೋಷಣೆ ಎದ್ದು ಕಾಣುವುದಿಲ್ಲ. ವಿಶ್ವಾಮಿತ್ರ ಶಿಷ್ಯನಾದ ಗಾಲವನು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಹೊರಡುವಾಗ ‘ಗುರುದಕ್ಷಿಣೆಯಾಗಿ ಏನನ್ನು ಕೊಡಲಿ?’ ಎಂದು ಕೇಳುತ್ತಾನೆ. ವಿಶ್ವಾಮಿತ್ರರು ಗುರುದಕ್ಷಿಣೆ ಬೇಡವೆಂದರೂ ಕೇಳುವುದಿಲ್ಲ. ಕೊನೆಗೆ ವಿಶ್ವಾಮಿತ್ರರು, ‘ಒಂದು ಕಿವಿ ಮಾತ್ರ ಕಪ್ಪಾಗಿರುವ ಎಂಟುನೂರು ಶ್ವೇತಾಶ್ವಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಬಾ’ ಎಂದು ಹೇಳುತ್ತಾರೆ. ಆದರೆ, ಅಂಥ ವಿಶೇಷ ಗುಣದ ಕುದುರೆಗಳು ಬಹಳ ದುರ್ಲಭವಾದುವೆಂಬುದನ್ನು ಅರಿತಾಗ ಗಾಲವ ದಾನಶೂರ ಯಯಾತಿ ಮಹಾರಾಜನ ಬಳಿ ಸಹಾಯ ಬೇಡಲು ಹೋಗುತ್ತಾನೆ. ಆಗಷ್ಟೇ ದೊಡ್ಡದೊಂದು ಯಾಗ ಮುಗಿಸಿದ ಯಯಾತಿಯ ಬಳಿ ಅಶ್ವಗಳಿಲ್ಲ. ಆದರೆ, ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಯಯಾತಿ ತನ್ನ ಮಗಳು ಮಾಧವಿಯನ್ನು ಗಾಲವನ ವಶಕ್ಕೆ ಬಿಟ್ಟು ‘ರೂಪಸಿಯಾದ ಈಕೆಯನ್ನು ಬೇಕಾದ ಹಾಗೆ ಬಳಸಿಕೊಂಡು ನಿನಗೆ ಬೇಕಾದ ಅಶ್ವಗಳನ್ನು ಪಡೆ’ ಅನ್ನುತ್ತಾನೆ. ಹಾಗೆ ಗಾಲವನು ಮಾಧವಿಯನ್ನು ಮೂರು ಮಂದಿ ರಾಜರ ಬಳಿಗೆ ಕರೆದೊಯ್ದು ಅವರಿಂದ ತಲಾ ಇನ್ನೂರು ಅಶ್ವಗಳನ್ನು ಪಡೆದು ಆ ರಾಜರುಗಳಿಗೆ ಒಂದು ವರ್ಷದ ಮಟ್ಟಿಗೆ ಉಪಯೋಗಿಸಿಕೊಳ್ಳಲು ಮಾಧವಿಯನ್ನು ಒಪ್ಪಿಸುತ್ತಾನೆ. ಮೂಲ ಕಥೆಯಲ್ಲಿ ಮಾಧವಿಯ ಮನಸ್ಸಿನ ಸಂಘರ್ಷಗಳು ವ್ಯಕ್ತವಾಗಿಲ್ಲ. ‘ಪುರುಷರಿಂದ ಲೈಂಗಿಕವಾಗಿ ಎಷ್ಟು ಸಾರಿ ಬಳಸಲ್ಪಟ್ಟರೂ ನನ್ನ ಕನ್ಯತ್ವ ಉಳಿಯುವಂಥ ವರ ನನಗಿದೆಯಾದ್ದರಿಂದ ನಾನು ನಿನಗೆ  ಸಹಾಯ ಮಾಡಬಲ್ಲೆ’ ಎಂದು ಗಾಲವನ ಬಳಿ ಅವಳೇ ಹೇಳುತ್ತಾಳೆ . ಓಎನ್‍ವಿ ಕುರುಪ್ ಬರೆದ ಈ ಕೃತಿಯಲ್ಲಿ ಅವರು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿ ಇಡೀ ಕಥೆಯನ್ನು ಪುರುಷರಿಂದ ಘೋರ ಅನ್ಯಾಯಕ್ಕೊಳಗಾಗಿ ಮಾನಸಿಕ ಯಾತನೆಯನ್ನು ಅನುಭವಿಸಿರಬಹುದಾದ ಮಾಧವಿಯ ದೃಷ್ಟಿಯಿಂದ ಬರೆಯಲಾಗಿದೆ. ಆದ್ದರಿಂದ ಇದರ ಸ್ತ್ರೀವಾದಿ ಓದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ.ಮಲಯಾಳದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಓಎನ್‍ವಿಕುರುಪ್ ಅವರ ‘ಸ್ವಯಂವರಂ’ ಎಂಬ ಖಂಡಕಾವ್ಯದ ಭಾವಾನುವಾದವಿದು. ಮಹಾಭಾರತದ `ಉದ್ಯೋಗ ಪರ್ವ’ ದಲ್ಲಿ ಬರುವ ಒಂದು ಉಪಾಖ್ಯಾನದಲ್ಲಿ ಪುರುಷ ವರ್ಗದಿಂದ ಘೋರವಾಗಿ ಶೋಷಣೆಗೊಳಗಾದ ಮಾಧವಿ ಈ ಕಥೆಯ ನಾಯಕಿಯಾಗಿದ್ದು ಇಡೀ ಕಾವ್ಯವೇ ಅವಳ ದೃಷ್ಟಿಕೋನದಿಂದ ರಚಿತವಾಗಿದ್ದರಿಂದ ಸ್ತ್ರೀವಾದಿ ಓದಿಗೆ ಒಳಪಡಿಸಲು ಅತ್ಯಂತ ಸೂಕ್ತವಾದ ಕೃತಿಯಿದು ಎಂದೆನ್ನಿಸಿ ಅನುವಾದಕಿ ಅದರ ಶೀರ್ಷಿಕೆಯನ್ನು ‘ಮಾಧವಿ ಕಥನ ಕಾವ್ಯ’ವೆಂದು ಬದಲಾಯಿಸಿದ್ದಾರೆ . ಇದನ್ನು ಓದಿದಾಗೆಲ್ಲ ರಾಮಾಯಣದ ಸೀತೆಯ ನೆನಪಾಗುತ್ತದೆ.

Interested customers may write to us at mup@manipal.edu about purchasing the book. 

Also available on