Ripunjaya – Review

ಭಾಷೆಯ ಪರಿಧಿಯನ್ನು ಮೀರಿ ಕಾಲ್ಪನಿಕ ಸಾಹಸಮಯ ಕಥೆಗಳು ಮಕ್ಕಳ ಮನರಂಜನೆಯಲ್ಲಿ ಈವತ್ತಿಗೂ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಕಥೆಗಳ ಮೂಲಕ ಮಕ್ಕಳಿಗೆ ಧೈರ್ಯ, ಸಾಹಸಮಯ ಪ್ರವೃತ್ತಿ, ಎಂತಹ ವಿಷಮ ಪರಿಸ್ಥಿತಿಯಲ್ಲೂ ಧೃತಿಗೆಡದಿರುವಿಕೆ, ನೀತಿ, ಜ್ಞಾನ, ಇತ್ಯಾದಿ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರಣೆಯೂ ದೊರೆಯುತ್ತದೆ. ಇಂತಹ ಕಥೆಗಳು ದೃಶ್ಯಮಾಧ್ಯಮದಲ್ಲೂ ಯಶಸ್ಸುನ್ನು ಕಂಡಿದ್ದು, ‘ಶಕ್ತಿಮಾನ್’ ನಂತಹ ಚಿತ್ರಕಥಾ ಮಾಲಿಕೆ ಮಕ್ಕಳನ್ನು ಬಹಳಷ್ಟು ಪ್ರಭಾವಿಸಿವೆ. ಮಕ್ಕಳಿಗಾಗಿ ಕನ್ನಡದಲ್ಲಿ ಅಮರ ಚಿತ್ರಕಥಾ ಹೊರತುಪಡಿಸಿದರೆ, ಲೇಖಕಿ ಸತ್ಯವತಿ ಹರಿಕೃಷ್ಣನ್ ಅವರ ಸಾಹಸಮಯ, ಕಾಲ್ಪನಿಕ ಕಥೆ ‘ರಿಪುಂಜಯ’ ನಮ್ಮ ನಾಡ ಭಾಷೆಯಲ್ಲಿ ಬರೆದಿರುವುದು ವಿಶೇಷ.

ಈ ಕಥೆ ಪ್ರಾಚೀನ ಗುರುಕುಲ ಶಿಕ್ಷಣ ಪದ್ಧತಿ, ಅಸ್ತ್ರ, ಶಸ್ತ್ರ, ತಂತ್ರ ಮಂತ್ರಗಳ ಪ್ರಯೋಗದ ವಿಷಯಗಳನ್ನೊಳಗೊಂಡಿದೆ. ಪ್ರಧಾನವಾಗಿ ಶ್ರುತಕೀರ್ತಿ, ಜಯಕೀರ್ತಿ ಮತ್ತು ಗುಣಕೀರ್ತಿ ಎಂಬ ಮೂರು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಹಂತದಲ್ಲಿ ಗುರುಗಳ ಆದೇಶದಂತೆ ಪ್ರಾಣವನ್ನು ಪಣಕ್ಕಿಟ್ಟು ನಡೆಸಿದ ಸಾಹಸಗಳ ಸುತ್ತ ಸಾಗುತ್ತದೆ. ಪ್ರಾಚೀನ ಶಿಕ್ಷಣದ ಮಹತ್ವ ಗುರುಶಿಷ್ಯರ ಪ್ರೀತಿ-ಗೌರವ, ಪರಿಸರ ಪ್ರೇಮ, ಮೂಕಪ್ರಾಣಿಗಳ ಮೇಲೆ ಕರುಣೆ, ಪ್ರಯತ್ನದಲ್ಲಿ ನಂಬಿಕೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆನ್ನುವ ಮನೋಭಾವ ಇತ್ಯಾದಿ ಸದ್ಗುಣ ಸಂಪನ್ನ ಪಾತ್ರಗಳನ್ನು ಇಲ್ಲಿ ಬಿಂಬಿಸಲಾಗಿದೆ.

ಹತ್ತು ಅಧ್ಯಾಯಗಳಲ್ಲಿ ಮೇಲಿನ ಮೂರು ವಿದ್ಯಾರ್ಥಿಗಳು ನಡೆಸುವ ಸಾಹಸಮಯ ಪಯಣಕ್ಕೆ ಅನುಗುಣವಾಗಿ ಇಟ್ಟಂತ ಶೀರ್ಷಿಕೆಗಳು ಗಮನ ಸೆಳೆಯುತ್ತವೆ. ಸಮಸ್ಯೆಗಳನ್ನು ಒಂದೊAದಾಗಿ ಬಗೆಹರಿಸುತ್ತಾ ಸಾಗಿದಂತೆ ಅಂತಿಮವಾಗಿ ‘ರಿಪುಂಜಯ’ ನನ್ನು ಬಂಧಿಸಲಾಗುತ್ತದೆ. ಒಟ್ಟಿನಲ್ಲಿ ಮಕ್ಕಳ ಮನರಂಜನೆಗೆ ಬೇಕಾದ ಚಮತ್ಕಾರ, ಜಾಣ್ಮೆ, ಸಾಹಸ, ನೀತಿ, ಹಲವು ಸಂದೇಶ, ಜನಪದ, ಪುರಾಣ ಕಥೆಗಳ ವೈವಿಧ್ಯತೆಯನ್ನೊಳಗೊಂಡ ಕಥೆಯ ನಿರೂಪಣಾ ಶೈಲಿ ಗಮನಸೆಳೆಯುತ್ತದೆ. ಗುರುಗಳ ಆದೇಶದಂತೆ ಬಂಧನಕ್ಕೊಳಗಾದ ‘ರಿಪುಂಜಯ’ ಯಾರು ? ಅವನನ್ನು ಬಂಧಿಸುವAತೆ ಗುರುಗಳು ಯಾಕೆ ಆದೇಶ ನೀಡುತ್ತಾರೆ ಎಂಬ ರಹಸ್ಯ ಕೊನೆಯವರೆಗೂ ಕಾಪಾಡಿಕೊಂಡದ್ದಲ್ಲದೇ ಈ ಕುರಿತ ಸಣ್ಣ ಸುಳಿವು ಕೂಡ ಸಿಗದಷ್ಟು ಬಿಗುವಾದ ನಿರೂಪಣೆ ಯಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.

ಹಾಸ್ಯ ಬರವಣಿಗೆಯ ಮೂಲಕ ಗುರುತಿಸಿಕೊಂಡು, ‘ತರಂಗ’, ‘ತುಷಾರ’, ‘ಮಯೂರ’ ದಂತ ಮಾಸ ಪತ್ರಿಕೆಗಳ ಮೂಲಕ ಓದುಗರಿಗೆ ಪರಿಚಿತರಾಗಿರುವ ಲೇಖಕಿ ಸತ್ಯವತಿ ಹರಿಕೃಷ್ಣನ್ ೬ ಹಾಸ್ಯ ಸಂಕಲನ ಸೇರಿ ೮ ಕೃತಿಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ. ಇಂದಿನ ವಿದೇಶಿ ಸಂಸ್ಕೃತಿಯನ್ನು ಬಿಂಬಿಸುವ ಮಕ್ಕಳ ಮನರಂಜನಾ ಕಥೆಗಳ ನಡುವೆ, ನಮ್ಮ ನೆಲದ ಸಂಸ್ಕೃತಿಯನ್ನು ಪರಿಚಯಿಸುವಂತ ‘ರಿಪುಂಜಯ’ ಕೃತಿ ಮಕ್ಕಳ ಮನಗೆಲ್ಲುವಲ್ಲಿ ಯಶಸ್ವಿಯಾಗಲಿ ಎಂಬುದು ನನ್ನ ಆಶಯ.