Pot of Butter – Review (Kannada)

ಕಜ್ಜಾಯ ಕೊಡುವುದೇನು ಕೊಂಬುದೇನು’ ಇದರ ಆಂಗ್ಲ ಭಾಷಾಂತರ ಕೃತಿ ಪಾಟ್ ಆಫ್ ಬಟರ್ ಅಂಡ್ ಅದರ್ ಶಾರ್ಟ್ ಸ್ಟೋರೀಸ್’ ನಾನು ಕಂಡಂತೆ

ದ.ರಾ. ಬೇಂದ್ರೆಯವರ ಕವನದ ಸಾಲಿನೊಂದಿಗೆ ಆರಂಭವಾಗುವ ಸುನಂದ ಬೆಳಗಾಂವ್ಕರ್ ರ ಈ ಕಥಾಗುಚ್ಚದ ಪ್ರತಿಯೊಂದು ಶೀರ್ಷಿಕೆಗಳು ತನ್ನೊಳಗಿನ ಕಥಾವಸ್ತುವನ್ನು ಬಿಂಬಿಸುತ್ತವೆ. ಇದರಲ್ಲಿ ಬರುವ 9 ಕಥೆಗಳು ಕೂಡ ಲೇಖಕರ ಪ್ರಬುದ್ಧ ಜ್ಞಾನಭಂಡಾರದ ಸಂಕೇತವಾಗಿದೆ. ಸುನಂದ ಬೆಳ್ಗಾಂವ್ಕರ್, ಹುಟ್ಟಿ ಬೆಳೆದದ್ದು ಧಾರವಾಡದಲ್ಲಾದರೂ ವಿವಾಹದ ತರುವಾಯ ಪತಿಯೊಂದಿಗೆ ಆಪ್ರೀಕಾದ ಜಾಂಬಿಯದಲ್ಲಿ ನೆಲೆಸಿದ ನಂತರ ತಮ್ಮ ಬರವಣಿಗೆಯನ್ನು ಆರಂಭಿಸಿದವರು. ಆಫ್ರಿಕಾದ ದಟ್ಟ ಕಾನನದ ನಡುವೆ ತಾನು ಬಾಲ್ಯದಲ್ಲಿ ಕಂಡ ಘಟನೆಗಳನ್ನು ಪದಪುಂಜಗಳಲ್ಲಿ ಪೋಣಿಸಿ, ಓದುಗನ ಮನಗೆಲ್ಲುವಂತ ಅನೇಕ ಕೃತಿಗಳನ್ನು ರಚಿಸಿದರು. ಇಂತಹ ಕೃತಿಗಳಲ್ಲಿ ಅಂದಿನ ಜನರ ಜನಪದ, ಸಾಹಿತ್ಯಿಕ, ಆರೋಗ್ಯ ಜ್ಞಾನದ ಸಮೃದ್ಧತೆ ನಮಗೆ ಕಾಣಸಿಗುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ಇವರು ನೀಡಿದ ‘ಕಜ್ಜಾಯ’ ಸಂಕಲನ ಅತ್ಯಂತ ಮಹತ್ವದ್ದಾಗಿದೆ.

ಅನುವಾದಕರಾದ ಸ. ಉಷಾ ಕನ್ನಡ ಸಾಹಿತ್ಯ ಲೋಕದಲ್ಲಿ ಲೇಖಕಿ ಮತ್ತು ವಿಮರ್ಷಕಿಯಾಗಿ ಗುರುತಿಸಿಕೊಂಡು, ಕವನಗಳ ಮೂಲಕ ನಮಗೆಲ್ಲಾ ಪರಿಚಿತರಾದವರು. ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಕೊಂಡ ಇವರು 2017ನೇ ಸಾಲಿನ ಪ್ರತಿಷ್ಠಿತ ಅತ್ತಿಮಬ್ಬೆ ಪ್ರಶಸ್ತಿಯನ್ನು ಪಡಕೊಂಡವರು. ಅನುವಾದಕರಾದ ವೈಜಯಂತಿ ಸೂರ್ಯನಾರಾಯಣ ವೃತ್ತಿಯಲ್ಲಿ ವೈದ್ಯೆಯಾದರೂ, ತಾಯಿ ಸುನಂದ ಬೆಳ್ಗಾಂವ್ಕರ್ ರಂತೆ ತಮ್ಮ ಬಾಲ್ಯದ ಜೀವನವನ್ನು ಧಾರವಾಡದಲ್ಲಿ ಕಳೆದು, ಸಾಹಿತ್ಯಿಕ ವಾತಾವರಣದಲ್ಲಿ ಬೆಳೆದವರು. ಪ್ರಸ್ತುತ ಭಾಷಾಂತರ ಕೃತಿಯ ಮೂಲಕ ಸಾಹಿತ್ಯ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿರುತ್ತಾರೆ.

ಕನ್ನಡಿಗರಾಗಿ ಒಂದು ಕಥೆಯನ್ನು ಸುಲಭವಾಗಿ ಓದುವಂತೆ ಈ ಅನುವಾದಿತ ಕೃತಿ ನಮ್ಮನ್ನು ಓದಿಸುತ್ತಾ ಮುಂದೆ ಸಾಗುತ್ತದೆ. ಶಿಕ್ಷಣ ಕಾಶಿ ಧಾರವಾಡದ ಸಾಹಿತ್ಯ ಭಂಡಾರದ ದ್ಯೋತಕವೆನ್ನುವಂತೆ ಇಲ್ಲಿನ ಜನಸಾಮಾನ್ಯರ ಅಗಾಧ ಪ್ರೌಢಿಮೆ, ಅವರ ಜೀವನ ಪದ್ಧತಿ, ಆಚಾರವಿಚಾರ, ಮೌಲ್ಯಾಧರಿತ ಜೀವನ, ಹಬ್ಬಹರಿದಿನದ ವೈಭವ, ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ಕಟ್ಟುಪಾಡುಗಳು, ಗಾದೆಗಳು, ಲಾವಣಿಗಳು, ಜನಮಾನಸದಲ್ಲಿ ಬೆರೆತು ಹೋದ ವೀರಮಹಿಳೆಯರ ಆದರ್ಶಗಳು, ಪುರಂದರ ದಾಸರು, ರವೀಂದ್ರನಾಥ ಠಾಗೋರ್, ಬೇಂದ್ರೆಯ ಕವನಗಳು, ಮಹತ್ವದ ಗ್ರಂಥಗಳ ಉಲ್ಲೇಖ, ಜನಸಾಮಾನ್ಯರು ಈ ಗ್ರಂಥಗಳ ಮೇಲಿಟ್ಟಿರುವ ನಂಬಿಕೆ, ಜನಪದ ಆಚರಣೆಗಳು, ಮನರಂಜನೆ, ಸಿರಿತನ-ಬಡತನ, ಕಷ್ಟ-ಕಾರ್ಪಣ್ಯಗಳು, ಆರೋಗ್ಯ ಕುರಿತಾದ ಕಾಳಜಿ, ಮನೆ ಮದ್ದು, ಇತ್ಯಾದಿ, ಇತ್ಯಾದಿ… ಮಹತ್ವದ ವಿಷಯಗಳನ್ನು ಅಕ್ಷರದಲ್ಲಿ ಪೋಣಿಸಿ ಕಥೆಗಳಲ್ಲಿ ಯಥೇಚ್ಚವಾಗಿ ಬಿಂಬಿಸಲಾಗಿದೆ. ಬೇಂದ್ರೆಯವರ ಕವನಗಳನ್ನು ಕನ್ನಡದಲ್ಲಿ ಆಂಗ್ಲಶೈಲಿಯಲ್ಲಿ ಓದುವಂತೆ ಬಳಸಿಕೊಂಡಿದ್ದು, ಧಾರವಾಡದ ಹಳ್ಳಿಭಾಷೆಯ ಜನಬಳಕೆಯ ಪದಗಳನ್ನು ಯಥಾವತ್ತಾಗಿ ಬಳಸಿ ಕೊನೆಗೆ ಇದರ ವಿವರಣೆ ನೀಡಿದ್ದು, ಸ್ಫುಟವಾಗಿ ನಿಖರವಾಗಿ ಅನುವಾದವೂ ನಡೆದಿರುವುದು ಅನುವಾದಕರ ಶ್ರಮವನ್ನು ತೋರಿಸುತ್ತದೆ ಜೊತೆಗೆ ಓದುಗರಿಗೆ ನೈಜತೆಯ ಭಾವನೆ ಮೂಡಿಸುವಲ್ಲಿ ಸಫಲವಾಗಿದೆ.

9 ಕಥೆಗಳಲ್ಲಿ ಓದುಗರ ಮನಕಲುಕುವ, ತ್ಯಾಗದ, ಕೌಟುಂಬಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಕಥೆಗಳು ಪ್ರಧಾನವಾಗಿದೆ, ‘ಋಣ’ದ ಲ್ಲಿ ಬರುವ ಮೂಕಪ್ರಾಣಿ ನಾಯಿಯ ಕಥೆ, ಬಡತನದ ಬೇಗೆಯಲ್ಲಿ ನಲುಗಿದ ಬೆಲ್ಲದ ಬ್ರಾಹ್ಮಣದ ಕಥೆ,  ಜೀವನ ಸಾರ್ಥಕ್ಯವೆನಿಸುವಂತೆ ಬದುಕಿದ ‘ಮೊಸರು ಅವಲಕ್ಕಿ’, ಶಾಲಕ್ಕನ ಕಥೆಗಳು ತುಂಬಾ ಇಷ್ಟವಾಗುತ್ತದೆ. ಪ್ರತಿಯೊಂದು ಕಥೆಯಲ್ಲಿಯೂ ಮನಸ್ಸಿನ ಭಾವನೆಗಳಿಗೆ ಮುಟ್ಟುವಂತ ‘ಬಿತ್ತಿದಂತೆ ಬೆಳೆ, ಹೆಣ್ಣು ಮತ್ತು ಭೂಮಿ ತ್ಯಾಗದ ಸಂಕೇತ’ ಇತ್ಯಾದಿ ಮುತ್ತಿನಂತಹ ಮಾತುಗಳು ಗಮನ ಸೆಳೆಯುತ್ತವೆ. ಬೆಣ್ಣೆ ಮಾರುತ್ತಾ ಜೀವನ ಸಾಗಿಸುವ ಬದುಕು ಸವೆಸುವ ಭರ್ಮಿಯ ವ್ಯವಹಾರ ಜಾಣ್ಮೆ, ಪ್ರಯತ್ನ ಶೀಲರಾಗಿ ಬದುಕ ಬೇಕೆನ್ನುವ ಸಂದೇಶ ನೀಡುವ ಹೂ ಮಾರುವ ಮಾಲಿಮಾಲಿಯ ಕಥೆ ನೆನಪಿನಲ್ಲಿ ಉಳಿಯುತ್ತದೆ.

ಇಂದಿನ ಜೀವನ ಪದ್ಧತಿಗಳಿಗೆ ಹೋಲಿಸಿದಲ್ಲಿ ಈ ಭಾಷಾಂತರ ಕೃತಿಯ ಹಳ್ಳಿಯ ಜೀವನ ಚಿತ್ರಣ ಈಗ ನಮಗೆ ಕಾಣಸಿಗದಿದ್ದರೂ, ಉಲ್ಲೇಖಿಸಿದ ಮೌಲ್ಯಗಳೂ, ಜೀವನಾನುಭವದ ಮಾತುಗಳು, ಸಂದೇಶಗಳು ಇಂದಿಗೂ ಪ್ರಸ್ತುತ ವೆನಿಸುತ್ತದೆ. ನಗರ ಜೀವನವನ್ನು ಹೊಂದಿಕೊಂಡರೂ, ಹಳ್ಳಿ ಜೀವನ ಶೈಲಿಯನ್ನು ಇಷ್ಟಪಡುವ, ಜೀವನ ಮೌಲ್ಯಗಳಿಗೆ ಆದರ್ಶ ಪ್ರಾಯರಾಗಿ ಬದುಕಬೇಕೆನ್ನುವ ಅನೇಕ ಓದುಗ ಮನಸ್ಸುಗಳಿಗೆ ಈ ಭಾಷಾಂತರ ಕೃತಿ ಧಾರವಾಡ ಮಾತ್ರವಲ್ಲದೇ ಈ ಮಣ್ಣಿನ ಸಮಗ್ರ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆೆ. ಈ ಕೃತಿಯ ಕೊನೆ ಪುಟ ತಿರುವಿದಾಗ 50 ವರ್ಷಗಳ ಹಿಂದಿನ ಧಾರವಾಡದ ಹಳ್ಳಿಯ ಜೀವನದ ಚಿತ್ರಣವನ್ನು ಬಾಲ್ಯದಲ್ಲಿ ಗಮನಿಸಿದ ನೆನಪಿನ ಸಂಗತಿಗಳನ್ನು ಮೂಲಕೃತಿಗೆ ಚ್ಯುತಿ ತಾರದಂತೆ ಆಂಗ್ಲಭಾಷೆಯಲ್ಲಿಯ ಅನುವಾದ ಮಾಡಲಾಗಿದೆ ಎಂಬ ಅನುವಾದಕರಾದ ಸ ಉಷಾ ಮತ್ತು ವೈಜಯಂತಿ ಸೂರ್ಯನಾರಾಯಣ ಅವರ ಮಾತು ನೈಜವಾಗಿದೆ ಎಂದನಿಸುತ್ತದೆ.