Nanna Parni Shale – Review (Kannada)

ಈಗ ಸಾಮಾನ್ಯ ಆಡು ಭಾಷೆಯಲ್ಲಿ ಗ್ರೀನ್, ವೈಟ್ ಎಂದು ಏನೂ ಮುಲಾಜಿಲ್ಲದೆ ಪ್ರಯೋಗವಾಗುತ್ತಿದೆ. ಆದರೆ ಆಂಗ್ಲ ಭಾಷೆಯ ಗ್ರೀನ್ ಎಂದಾಗ ನಮ್ಮ ಕಲ್ಪನೆಗೆ ಬರುವ ಸ್ವಚ್ಛತೆ, ಲವಲವಿಕೆ, ಜೀವನೋತ್ಸಾಹ ವೈಟಿನಲ್ಲಿ ಕಾಣುವುದಿಲ್ಲ. ಅದಕ್ಕೆ ನಾವು ಹಸಿರು ಎಂದಾಗಲೂ ಗ್ರೀನ್ ಕೊಡುವ ಸಮಗ್ರ ಅರ್ಥವಾಗದೆ ಬರೇ ಬಣ್ಣಕ್ಕೆ ಸೀಮಿತವಾಗುತ್ತದೆ. ಇಲ್ಲಿಯೇ ಪ್ರೊಫೆಸರ್ ಭಟ್ಟರು ಉಪಯೋಗಿಸಿದ ಪ್ರಯೋಗ “ಪರ್ಣಿ” ಓದುಗರಿಗೆ ಸಮಗ್ರ ಚಿತ್ರ ದೊರೆಯುವಂತೆ ಮಾಡಿದ್ದು.

ಠಾಕುರ್ ಎಸ್ ಪೌಡಿಯಲ್ ಅವರು, ಭೂತಾನದವರು, ಮೈ ಗ್ರೀ ನ್ ಸ್ಕೂಲ್ ಇಂಗ್ಲಿಷ್ನಲ್ಲಿ ಬರೆದದ್ದು ಅವರ ಕಲ್ಪನೆಯ ಮಾದರಿ ಶಿಕ್ಷಣ ರಂಗ. ಶಿಕ್ಷಣ ಬೇರೆ ಕ್ಷೇತ್ರಗಳಾದ ವಿಜ್ಞಾನ, ಸಾಹಿತ್ಯ, ಲಲಿ ತಕಲೆಗಳಂತೆ ವಿಶಿಷ್ಟವಾದುದು. ಹಾಗಾಗಿ ಠಾಕೂರರ ಕೃತಿಯನ್ನು ಕನ್ನಡಕ್ಕೆ ಅನುವಾದಿಸುವಲ್ಲಿ ಶಿಕ್ಷಣ ಹಾಗೂ ಭಾಷಾ ಕ್ಷೇತ್ರದಲ್ಲಿ ಹಲವಾರು ದಶಕಗಳಷ್ಟು ದುಡಿದು ಸಾಧಿಸಿದ ಎನ್ ಟಿ ಭಟ್ಟರನ್ನು ಆಯ್ಕೆಮಾಡಿದ್ದು ಸಮಂಜಸವಾಗಿಯೇ ಇದೆ. ಒಬ್ಬ ಶಿಕ್ಷಣ ತಜ್ಞನೇ ಅನುವಾದ ಮಾಡಿದ ಕಾರಣ ಓದುಗರಿಗೆ ಅನುವಾದಿತ ಕೃತಿಯಲ್ಲಿ ಯಾವುದೇ ಕೃತ್ರಿಮ ಕಂಡು ಬರುವುದಿಲ್ಲ. ಓದುವಾಗಲೆಲ್ಲ ನಾವೇ ಆ ಪರಿಸರದಲ್ಲಿ ಇದ್ದೇವೊ, ಅಲ್ಲಿಯ ಅದೃಶ್ಯ ದೈವೀಕ ಕಂಪನವ ನ್ನು ಅನುಭವಿಸುತಿದ್ದೇವೊ ಎಂದು ಅನಿಸುತ್ತದೆ.

ಶಿಕ್ಷಣದ ಉದಾತ್ತ ಗುರಿ, ಸಾಧಿಸುವ ದಾರಿ, ವಠಾರ ಎಲ್ಲವು ಸ್ವಚ್ಛವಾಗಿರುವುದನ್ನು ಮೂಲ ಲೇಖಕರು ಗ್ರೀನ್ ಎಂಬುದನ್ನೆ ಎನ್ ಟಿ ಭಟ್ಟರುಪರ್ಣಿ ಎಂದು ವಿಶಾಲ ಅರ್ಥದಿಂದ ಪರಿಚಯಿಸುತ್ತಾರೆ. ಒಮ್ಮೆ ಈ ಪ್ರಯೋಗವನ್ನು ಪರಿಚಯಿಸಿದ ನಂತರ ಪರ್ಣಿ ಶಾಲೆ ಎಂಬಲ್ಲೆಲ್ಲ ಪುನಃ ಪುನಃ “ಗ್ರೀನ್ ಸ್ಕೂಲ್” ಎಂದು ಪರಿಚಯಿಸುವುದು ಅನಗತ್ಯ ಎಂದು ನನಗೆ ಅನಿಸುತ್ತದೆ. ಹಾಗೆಯೇ ಬಾತು ಕೋಳಿಯ ಕುರಿತ ಶಿಶು ಗೀತೆಯನ್ನು ಯಥಾವತ್ತಾಗಿ ಪರಿಚಯಿಸಿದ್ದರೆ ಚೆನ್ನಾಗಿರುತಿತ್ತು.

ಅನುವಾದಿತ ಕೃತಿಯನ್ನು ಓದುವಾಗ ನನಗನಿಸುವುದು ಎನ್ ಟಿ ಭಟ್ಟರು ಓರ್ವ ಶಿಕ್ಷಣ ತಜ್ಞರಲ್ಲದಿರುತಿದ್ದರೆ, ಅನುಭವಿ ಅಧ್ಯಾಪಕರಾಗಿರತಿದ್ದರೆ ಬಳಸಿದ ಭಾಷಾ ಶೈಲಿ, ಶಬ್ದ ಪ್ರಯೋಗಗಳು ಅಷ್ಟು ಸಹಜವಾಗಿ ಮೂಡಲು ಕಷ್ಟವಿತ್ತೇನೊ ಎಂದು. ಕಾರಣ ಪ್ರತಿಪಾದಿಸಿದ ವಿಚಾರಗಳನ್ನು ಓದಲಾಗಲೀ, ಅರ್ಥೈಸಲಾಗಲೀ ಎಲ್ಲೂ ತಡಕಾಡುವ ಸಂದರ್ಭವೇ ಬರುವುದಿಲ್ಲ! ಇನ್ನೂ ವಿಶಿಷ್ಟವೆಂದರೆ ಆಸರ, ಗೋಷ್ಪಾರಿ, ತರ್ಜುಮೆಗಳಂತಹ ಅವರ ಮನೆಯ ಆಡು ಭಾಷೆಯ ಶಬ್ದಗಳು ಸೇರಿಕೊಂಡು ಅನುವಾದನ ಓದುಗನಿಗೆ ಹತ್ತಿರವಾಗುವುದು. ಮಾತ್ರವಲ್ಲ ಕೆಲವು ಹಂತದಲ್ಲಿ ಅನುವಾದಕರ ಅನಿಸಿಕೆಯೂ ಮೂಲಪ್ರತಿಯ ವಿಚಾರಧಾರೆಗೆ ಸೇರಿಕೊಂಡಿರಬಹುದಾಗಿ “ಪರ್ಣಿ”ಯ ಕಲ್ಪನೆ ಪರಿಣಾಮಕಾರಿಯಾಗಿಯೇ ಮೂಡಿ ಬಂದಿದೆ.

ಒಟ್ಟಿನಲ್ಲಿ ನನ್ನ ಪರ್ಣಿ ಶಾಲೆ ಓರ್ವ ಶಿಕ್ಷಣ ತಜ್ಞನ ಕನಸು, ಹೆತ್ತವರ ಮಕ್ಕಳ ಕಲ್ಪನೆಯ ದೇವಸ್ಥಾನ ಎಂದು ಚಿತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕನ್ನಡದಲ್ಲೂ ಮೂಡಿ ಬಂದಿದೆ, ಪುಸ್ತಕ ಆಕರ್ಷಕವಾಗಿದೆ. ಉತ್ತಮ ಹಾಳೆ, ಮುದ್ರಣ. ಕೆಲವು ವಿಶಿಷ್ಟಾಂಶಗಳನ್ನು ಪ್ರಕಟಿಸುವಾಗ ಕರಿ ಹಿನ್ನಲೆಯಲ್ಲಿ ಬಹಳ ಚಿಕ್ಕ ಅಕ್ಷರದಲ್ಲಿ ಮುದ್ರಿಸಿದ್ದು ಓದುಗನ ಕಣ್ಣಿಗೆ ಶ್ರಮದಾಯಕ, ಹಾಗೆ ಯಾವ ರೀತಿಯಲ್ಲೂ ಗಮನ ಸೆಳೆಯುವುದಿಲ್ಲ. ಯಾಕೆಂದರೆ ಅದು ಕರಿಹಲಗೆಯಲ್ಲ! ಬಿಳಿ ಹಿನ್ನಲೆಯಲ್ಲೆ ವಿಭಿನ್ನ ಲಿಪಿ ಶೈಲಿ ಯನ್ನು ಬಳಸಿದ್ದರೆ ಚೆನ್ನಾಗಿರುತಿತ್ತು.

ಕೃತಿಯುದ್ದಕ್ಕೂ ಆಕರ್ಷಕ ಚಿತ್ರಗಳನ್ನು ಹಾಕಿದ್ದು ಮೆಚ್ಚುವಂತಹದು. ಹಾಗೆ ಇಡೀ ಕೃತಿಯ ವಿಚಾರಗಳಿಗೆ ಮಾದರಿಯಾಗಿ ವಾಂಗ್ಮೊ ಶಾಲೆಯನ್ನು ಉದ್ದರಿಸಿದ್ದೂ ಸರಿಯೆ. ಜತೆಗೆ ಆ ಶಾಲೆಯ ಒಂದೆರಡು ಚಿತ್ರಗಳೂ ಪ್ರಕಟಿತವಾಗಿದ್ದರೆ ಕೃತಿ ಪರಿಪೂರ್ಣವಾಗಿರುತಿತ್ತು ಎಂದು ಅನಿಸುತ್ತದೆ.

ಮೈ ಗ್ರೀನ್ ಸ್ಕೂಲ್ ನ ಅನುವಾದನೆಯ ಸಾಧನೆಗೆ ಎನ್ ಟಿ ಭಟ್ಟರನ್ನು ನಾನು ಅಭಿನಂದಿಸುತ್ತೇನೆ. ಜತೆಗೆ ನಮ್ಮೂರಲ್ಲೆ ಅಲ್ಲಲಿ ್ಲ ಇರುವ, ಗಮನಕ್ಕೆ ಬಾರದ ಪರ್ಣಿ ಶಾಲೆಗಳ ಚಿತ್ರವನ್ನು ನಮ್ಮ ಕಲ್ಪನೆಗೂ ಬರುವಂತೆ ಮಾಡಿದ ಅವರಿಗೆ ಕೃತಜ್ಞ.

  ರಾಮಚಂದ್ರ ಭಟ್ಟ