ಮೂಲತಃ ಬೆಂಗಳೂರಿನವರಾದ ಎಸ್. ಕರ‍್ತಿಕ್ ಅವರು ಪ್ರತಿಯೊಂದು ಬರಹಕ್ಕೂ ತಲಸ್ಪರ್ಶಿಯಾಗಿ ಅಧ್ಯಯನಮಾಡುವ ಸ್ವಭಾವದವರು. ಶಾಸನಶಾಸ್ತ್ರ, ಕವಿ-ಕಾಲವಿಚಾರ, ಹಸ್ತಪ್ರತಿ, ಭಾರತೀಯ ಕಾಲಗಣನೆ, ನಾಣ್ಯಶಾಸ್ತ್ರ, ಸಂಗೀತಶಾಸ್ತ್ರ ಮುಂತಾದ ವಿಷಯಗಳಲ್ಲಿ ತಜ್ಞತೆ, ಪಾಂಡಿತ್ಯವನ್ನು ಹೊಂದಿದ್ದಾರೆ. ಈವರೆಗೂ ಸುಮಾರು ೧೫೦ರಷ್ಟು ಲೇಖನಗಳನ್ನು ವಿವಿಧೆಡೆ ಪ್ರಕಟಿಸಿದ್ದಾರೆ. ಶಾಸನ, ನಾಣ್ಯಶಾಸ್ತ್ರ, ಇತಿಹಾಸ, ಹಸ್ತಪ್ರತಿ, ಕವಿ-ಕಾಲವಿಮರ್ಶೆ, ಸಂಗೀತ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಒಳಕೊಂಡಿರುವ ಇವರ ಸ್ವತಂತ್ರ ಕೃತಿಗಳು: ‘ಪದಾರ್ಥ ಸಂಪದ’, ‘ಕೆಲವು ಕನ್ನಡ ನಿಘಂಟುಗಳು: ಸಮಸ್ಯೆಗಳು, ಪರಿಹಾರಗಳು’, ‘ಸಂಶೋಧನ ಸಂಭಾವನೆ’, ಸಂಗೀತಶಾಸ್ತ್ರಗ್ರಂಥಚಂದ್ರಿಕೆ ಎಂಬುವಾಗಿದ್ದು, ‘ಅಜ್ಞಾತಕರ್ತೃಕ ಭಾರತ ನಿಘಂಟು’, ‘ಮತಂಗನ ಬೃಹದ್ದೇಶಿ’, ‘ಯಕ್ಷಗಾನ ಹಸ್ತಪ್ರತಿಗಳ ಸೂಚೀಸಂಚಯ’ ಎಂಬ ಹೆಸರಿನವು ಅವರ ಸಂಪಾದಿತ ಕೃತಿಗಳಾಗಿವೆ. ಅನೇಕ ಕಡೆ ಉಪನ್ಯಾಸಗಳನ್ನು ನೀಡಿ, ವಿವಿಧ ವಿಚಾರಸಂಕೀರ್ಣಗಳಲ್ಲಿ ಭಾಗವಹಿಸಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅನೇಕ ಕರ‍್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಪ್ರಶಸ್ತಿಗಳು: ಕನ್ನಡ ಸಾಹಿತ್ಯ ಪರಿಷತ್ತಿನ ೨೦೧೬ನೆಯ ಸಾಲಿನ ‘ಅರಳು ಸಾಹಿತ್ಯ ದತ್ತಿ ಪ್ರಶಸ್ತಿ’, ಭಾರತ ಸರ್ಕಾರದ ‘ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ ರಾಷ್ಟçಪತಿ ಪ್ರಶಸ್ತಿ’ (೨೦೧೯), ಅಖಿಲ ಭಾರತ ಸಾಹಿತ್ಯಪರಿಷತ್ತಿನ ೨೦೨೩-೨೪ನೆಯ ಸಾಲಿನ ‘ವಾಗ್ದೇವಿ ಪ್ರಶಸ್ತಿ’. ಪ್ರಕೃತ ಕೃತಿಯು ಸಂಗೀತಕ್ಷೇತ್ರದ ವಿಶಿಷ್ಟ ಕೃತಿಗಳಲ್ಲಿ ಒಂದಾಗಿದೆ.
-
Sangeetashastragranthachandrike Volume-2
Author: S Karthik
ಸಂಗೀತಶಾಸ್ತ್ರಗ್ರಂಥಚಂದ್ರಿಕೆ ಯ ಎರಡನೆಯ ಸಂಪುಟವು ಭಾರತೀಯ ಸಂಗೀತದ ಶಾಸ್ತ್ರಕಾರರು ಮತ್ತು ಶಾಸ್ತ್ರಗ್ರಂಥಗಳ ಚರಿತ್ರೆಯನ್ನು ಒಳಗೊಂಡ ಕೃತಿಯಾಗಿದೆ. ಇದರಲ್ಲಿ ಪ್ರಕಟಿತ, ಅಪ್ರಕಟಿತ, ಲಭ್ಯ, ಅಲಭ್ಯ ಶಾಸ್ತ್ರಗ್ರಂಥಗಳ ಬಗೆಗೆ ಮೂಲ ಆಕರಗಳನ್ನೇ ಆಮೂಲಾಗ್ರವಾಗಿ ಗಮನಿಸಿ, ವಿಶದವಾಗಿ ಪರಿಚಯ ಮಾಡಿಕೊಡಲಾಗಿದೆ. ಎಷ್ಟೋ ಜನ ಅಜ್ಞಾತಶಾಸ್ತ್ರಕಾರರು ಮತ್ತು ಶಾಸ್ತ್ರಕೃತಿಗಳ ಬಗೆಗೆ ಖಚಿತವಾದ ಮಾಹಿತಿ ಆಕರ ಸಾಮಗ್ರಿಯ ಸಹಿತ ಇಲ್ಲಿ ದೊರಕುತ್ತದೆ. ಕರ್ನಾಟಕ ಸಂಗೀತ ಎಂಬ ಹೆಸರು ಹೇಗೆ ಬಂತೆಂಬ ವಿಚಾರದಲ್ಲಿ ಸ್ಪಷ್ಟವಾದ ವಿವರಗಳು ಇಲ್ಲಿ ದಾಖಲಾಗಿವೆ. ಹಿಂದಿನ ಅಧ್ಯಯನಗಳಿಗಿಂತ ಹೆಚ್ಚು ವಸ್ತುನಿಷ್ಠ ಮಾಹಿತಿ ಇಲ್ಲಿ ದೊರಕುತ್ತದೆ. ಕ್ರಿ.ಶ.ಸು ೧೨೫೦-೧೪೦೦ರ ನಡುವಿನ ಅವಧಿಯಲ್ಲಿದ್ದ ಶಾಸ್ತ್ರಕಾರರು ಮತ್ತು ಆ ಅವಧಿಯಲ್ಲಿ ರಚಿತವಾಗಿರುವ ಶಾಸ್ತ್ರಗ್ರಂಥಗಳ ಬಗೆಗೆ ರಚಿತವಾಗಿರುವ ಈ ಕೃತಿಯ ದ್ವಿತೀಯ ಸಂಪುಟವು ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ವಿರಳ ಅಪರೂಪದ ಕೃತಿಗಳಲ್ಲಿ ಒಂದಾಗಿದೆ.
Interested customers may write to us at mup@manipal.edu about purchasing the book.