ಒಂದು ಪುಟ್ಟ ಹಳ್ಳಿಯ ಎರಡು ಕುಟುಂಬಗಳ ವಸ್ತುಸ್ಥಿತಿ ಮತ್ತು ಕನಸುಗಳನ್ನು ಕೂಡಿಸಿ ಕಟ್ಟಲಾಗಿರುವ ರೇವತಿ ನಾಡಗೀರ ಅವರ ನಾಟಕ ‘ಗೊಂಬಿ ಮದವಿ’ ಹಲವು ಕಾರಣಗಳಿಂದ ಆಸಕ್ತಿ ಹುಟ್ಟಿಸುತ್ತದೆ. ಉತ್ತರ ಕರ್ನಾಟಕದ ದೇಶಿಯ ಸೊಗಡಿನಲ್ಲಿ ಸ್ಥಳೀಯ ನಂಬಿಕೆ-ಆಚರಣೆ-ಆಶೋತ್ತರಗಳು ದಟ್ಟವಾಗಿ ಹೆಣೆದುಕೊಂಡು ಒಂದು ಸ್ವಯಂಪೂರ್ಣ ಪುಟ್ಟ ವಿಶ್ವವೇ ಇಲ್ಲಿ ಸೃಷ್ಟಿಯಾಗಿದೆ. ಬಡ, ಮುಗ್ಧ ಹುಡುಗಿಯೊಬ್ಬಳ ಕನಸುಗಳು ಆ ಹಳ್ಳಿಯ ಪ್ರತಿಷ್ಠಿತ ಕುಟುಂಬವೊಂದರ ಕನಸುಗಳೊಡನೆ ಬೆರೆತು ಜಾತಿಭೇದ-ವರ್ಗಭೇದಗಳನ್ನು ಅಳಿಸಿ ಹಾಕಬಲ್ಲ ಸ್ಥಿತಿಯನ್ನು ಮುಟ್ಟಿಬಿಡುತ್ತವೆ. ಮೊದಮೊದಲು ವಾಸ್ತವ-ಅದ್ಭುತರಮ್ಯಗಳು ಬಿಡಿಬಿಡಿಯಾಗಿ ಕಾಣಿಸಿಕೊಂಡರೂ ಕ್ರಮೇಣ ಅವು ಒಂದುಗೂಡಿ ಲೇಖಕಿಯ ಜೀವನದೃಷ್ಟಿಯನ್ನು ಸ್ಪಷ್ಟಗೊಳಿಸುತ್ತವೆ. ಸ್ವತಃ ಓರ್ವ ಯಶಸ್ವಿ ರಂಗಕರ್ಮಿಯಾಗಿರುವ ರೇವತಿ ನಾಡಗೀರರ ನಾಟಕ ರಚನಾ ಕೌಶಲ್ಯ ಇಲ್ಲಿ ಸಾಕಷ್ಟು ಸಫಲವಾಗಿದೆ. ಓದುನಾಟಕವಾಗಿಯೂ ರಂಗನಾಟಕವಾಗಿಯೂ ಸಹೃದಯರ ಆಸಕ್ತಿಯನ್ನು ಕಾಯ್ದುಕೊಳ್ಳಬಲ್ಲ ಈ ರಚನೆ ಸ್ವಾಗತಾರ್ಹ. ಕನ್ನಡದಲ್ಲಿ ನಾಟಕಕಾರ್ತಿಯರು ತುಂಬಾ ಕಡಿಮೆ ಎಂಬ ಕೊರತೆಯನ್ನು ರೇವತಿ ನಾಡಗೀರರು ಸ್ವಲ್ಪಮಟ್ಟಿಗೆ ತುಂಬಿಕೊಟ್ಟಿದ್ದಾರೆ.
ಟಿ. ಪಿ. ಅಶೋಕ
Reviews
There are no reviews yet.